ಕ್ಯಾರವೆ ಎಣ್ಣೆ

ಕ್ಯಾರವೆ (ಜೀರಿಗೆ) ಬೀಜದಲ್ಲಿರುವ ಬಣ್ಣರಹಿತ ಅಥವಾ ನಸು ಹಳದಿ ಬಣ್ಣದ ಹಿತವಾಸನೆಯ ಎಣ್ಣೆ. ಇದರ ಗಿಡದ ಹೆಸರು ಕ್ಯಾರಮ್ ಕರ್ವಿ. ಈ ಎಣ್ಣೆ ಸುಲಭವಾಗಿ ಆವಿಯಾಗುತ್ತದೆ. ಬೀಜಗಳನ್ನು ಬಟ್ಟಿಯಿಳಿಸಿದಾಗ ಎಣ್ಣೆ ಬಿಡುಗಡೆಯಾಗಿ ನೀರಿನ ಆವಿಯೊಂದಿಗೆ ಬೆರೆತು ಈಚೆ ಬರುತ್ತದೆ. ಆವಿಯನ್ನು ತಂಪು ಮಾಡಿದಾಗ ಎಣ್ಣೆ ಬೇರ್ಪಡುತ್ತದೆ. 100 ಗ್ರಾಂ ಬೀಜದಿಂದ 3.5-5.2 ಗ್ರಾಮಿನಷ್ಟು ಎಣ್ಣೆ ದೊರೆಯುತ್ತದೆ. ಇದರಲ್ಲಿ ಸುಮಾರು 53%-63% ರಷ್ಟು ಸುವಾಸನೆಗೆ ಕಾರಣವಾದ ಕಾರ್ವೊನ್ ಎಂಬ ರಾಸಾಯನಿಕ ಇದೆ. ಇದಲ್ಲದೆ ಟರ್‍ಪೀನಿನ ಗುಂಪಿಗೆ ಸೇರಿದ ಕಾರ್‍ವೀನ್ ಮತ್ತು ಸೈಮೀನ್, ಲಿಮೊನೀನ್ ಎಂಬ ರಾಸಾಯನಿಕಗಳೂ ಅಲ್ಲದೆ ಪ್ರೋಟೀನು, ಅಂಟು ಮತ್ತು ಕ್ಯಾಲ್ಸಿಯಂ ಆಕ್ಸಲೇಟುಗಳೂ ಇರುತ್ತವೆ. ಈ ಎಣ್ಣೆ 90%ರ ಆಲ್ಕೊಹಾಲಿನಲ್ಲಿ ಒಂದು ಭಾಗದಲ್ಲಿ ಒಂದು ಭಾಗವೂ 80%ರ ಆಲ್ಕೊಹಾಲಿನಲ್ಲಿ ಏಳು ಭಾಗದಲ್ಲಿ ಒಂದು ಭಾಗವೂ ವಿಲೀನವಾಗುತ್ತದೆ.

ಕ್ಯಾರವೆ ಎಣ್ಣೆಯ ಉಪಯೋಗ ಔಷಧಿಗಳಲ್ಲಿ ಮತ್ತು ಸುವಾಸನಾ ತೈಲಗಳ ತಯಾರಿಕೆಯಲ್ಲಿ ಉಂಟು. ಇದನ್ನು ಹಿತವಾಸನೆ ಕಟ್ಟಲು ಹಾಗೂ ಹಸಿವು ಹೆಚ್ಚಿಸಲು ಉಪಯೋಗಿಸುವರು. ಹೊಟ್ಟೆಯ ನೋವಿನ ಮತ್ತು ಅಜೀರ್ಣದ ಮದ್ದುಗಳಲ್ಲಿ ಇದನ್ನು ಸೇರಿಸುತ್ತಾರೆ. ಕಾರ್ವೋನನ್ನು ತೆಗೆದ ಮೇಲೆ ಉಳಿದ ಎಣ್ಣೆಯನ್ನು ಸಾಬೂನುಗಳಿಗೆ ಸುವಾಸನೆ ಕಟ್ಟಲು ಉಪಯೋಗಿಸುತ್ತಾರೆ. ಕಾಡುಜೀರಿಗೆಯಿಂದ ಬಂದ ಎಣ್ಣೆಗೆ ಸಾಂದ್ರತೆ ಹೆಚ್ಚು. ಆದ್ದರಿಂದ ಅದರ ಉಪಯೋಗ ವೈನ್ ತಯಾರಿಕೆಯಲ್ಲಿ ಮತ್ತು ಸುಗಂಧ ಸಾಬೂನಿನ ತಯಾರಿಕೆಯಲ್ಲಿ ಮಾತ್ರ. ಜೀರಿಗೆಯನ್ನು ನೇರವಾಗಿಯೇ ಅಡುಗೆಗೂ ಕೇಕ್ ಮುಂತಾದವುಗಳ ತಯಾರಿಕೆಯಲ್ಲಿಯೂ ಬಳಸುತ್ತಾರೆ. ಪ್ರಪಂಚದ ನಾನಾ ಭಾಗಗಳಲ್ಲಿ ಇದರ ಗಿಡ ಉಂಟು. ಭಾರತದಲ್ಲಿ ಇದು ಚಳಿಗಾಲದ ಬೆಳೆ. 9,000'-12,000' ಎತ್ತರದಲ್ಲಿನ ಕಾಶ್ಮೀರ, ಕುಮಾಂವ್, ಘರ್‍ವಾಲ್ ಮುಂತಾದ ಪ್ರದೇಶಗಳಲ್ಲಿ ಇದು ಬೇಸಗೆಯ ಬೆಳೆ. ಹಿಮಾಲಯದಲ್ಲಿ ಇದು ಕಾಡು ಬೆಳೆ.				                               (ಎ.ಎಸ್.ಆರ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ